ನಂದದಾಸ
	ಕೃಷ್ಣಭಕ್ತಿ ಶಾಖೆಗೆ ಸೇರಿದ ಪ್ರಸಿದ್ಧ ಹಿಂದಿ ಕವಿ. 16ನೆಯ ಶತಮಾನದವ. ಸೂರದಾಸನ ಸಮಕಾಲೀನ. ಇವನ ಸೋದರ ಚಂದ್ರಹಾಸ. ಆಗಿನ ಕಾಲದಲ್ಲಿ ಪ್ರಚಲಿತವಾಗಿದ್ದ ಹಿಂದೀ ಭಾಷೆಯಲ್ಲಿ ತುಲಸೀದಾಸ ರಾಮಾಯಣವನ್ನು ಬರೆದಂತೆ ಈತ ಶ್ರೀಮದ್ಛಾಗವತವನ್ನು ಬರೆದಿದ್ದಾನೆ.

	ನಂದದಾಸ ದ್ವಾರಕೆಗೆ ಹೋಗುತ್ತ ದಾರಿಯಲ್ಲಿ ಸಿಂಧುನದ ಎಂಬ ಹಳ್ಳಿಯಲ್ಲಿ ಒಬ್ಬ ಚೆಲುವೆಯಾದ ಸ್ತ್ರೀಯನ್ನು ಮೋಹಿಸಿ, ಅವಳ ಮನೆಯ ಸಮೀಪವೇ ತಿರುಗಾಡತೊಡಗಿದ. ಇದರಿಂದ ಬೇಸರಗೊಂಡ ಅವಳ ಮನೆಯವರು ಅವಳನ್ನು ಕರೆದುಕೊಂಡು ಗೋಕುಲಕ್ಕೆ ಹೋದರು. ನಂದದಾಸ ಅಲ್ಲೂ ಅವಳನ್ನು ಹಿಂಬಾಲಿಸಿದ. ಅಲ್ಲಿ ಗೋಸ್ವಾಮಿ ವಿಠಲನಾಥಜೀಯ ಸದುಪದೇಶದಿಂದ ಮೋಹ ದೂರವಾಗಲು ನಂದದಾಸ ಶ್ರೀಕೃಷ್ಣಭಕ್ತನಾದನೆಂದು ಒಂದು ಕಥೆ.

	ಧ್ರುವದಾಸನೆಂಬ ಕವಿ ತನ್ನ ಭಕ್ತನಾಮಾವಲಿ ಎಂಬ ಕೃತಿಯಲ್ಲಿ ನಂದದಾಸನ ಕೃಷ್ಣಭಕ್ತಿಯನ್ನು ಪ್ರಶಂಸಿಸಿದ್ದಾನೆ.

	ಅಷ್ಟಛಾಪ ಎಂಬ ಎಂಟು ಮಂದಿ ಕೃಷ್ಣಭಕ್ತ ಕವಿಗಳ ಪಟ್ಟಿಯಲ್ಲಿ ಒಂದನೆಯ ಹೆಸರು ಸೂರದಾಸನದಾದರೆ ಎರಡನೆಯದು ಈ ನಂದದಾಸನದು. ಇವನ ಕೃಷ್ಣಭಕ್ತಿ ಗೀತೆಗಳು ಬಹಳ ಮಧುರುವೂ ಸರಸವೂ ಆಗಿ ಜನಸಾಮಾನ್ಯರಲ್ಲಿಯೂ ಪ್ರಚಲಿತವಾಗಿವೆ. ಇವನ ಅಂಕಿತ ನಂದದಾಸ ಎಂದು.

	ಇವನ ಕೃತಿಗಳಲ್ಲಿ ಎಲ್ಲಕ್ಕಿಂತ ಪ್ರಸಿದ್ಧವಾದುದು ರಾಸಪಂಚಾಧ್ಯಾಯೀ. ಇದು ರೋಲಾ ಎಂಬ ಛಂದಸ್ಸಿನಲ್ಲಿದೆ. ಇದರಲ್ಲಿ ಶ್ರೀಕೃಷ್ಣನ ಹಾಗೂ ಗೋಪಿಕೆಯರ ರಾಸಕ್ರೀಡೆ ಸಾಹಿತ್ಯಿಕವಾದ ರೋಚಕ ಭಾಷೆಯಲ್ಲಿ ವಿಸ್ತಾರವಾಗಿ ವರ್ಣಿತವಾಗಿದೆ.

	ಭಾಗವತ ದಶಮಸ್ಕಂಧ, ರುಕ್ಮಿಣೀಮಂಗಲ, ಸಿದ್ಧಾಂತ ಪಂಚಾಧ್ಯಾಯೀ, ರೂಪಮಂಜರೀ, ರಸಮಂಜರೀ, ಮಾನಮಂಜರೀ, ವಿರಹಮಂಜರೀ, ನಾಮಚಿಂತಾಮಣಿಮಾಲಾ, ಅನೇಕಾರ್ಥನಾಮಮಾಲಾ (ಕೋಶ) ಜ್ಞಾನಮಂಜರೀ, ದಾನಲೀಲಾ, ಮಾನಲೀಲಾ, ಅನೇಕಾರ್ಥಮಂಜರೀ, ಶ್ಯಾಮಸಗಾಈ, ಭ್ರಮರಗೀತ, ಸುದಾಮಚರಿತ-ಇವು ಇವನ ಇತರ ಕೃತಿಗಳು. ಇವಲ್ಲದೆ ಇನ್ನೂರಕ್ಕಿಂತ ಹೆಚ್ಚು ಶ್ರೀಕೃಷ್ಣಕೀರ್ತನೆಯ ಬಿಡಿಪದ್ಯಗಳು ಈತನ ಹೆಸರಿನಲ್ಲಿ ದೊರೆಯುತ್ತವೆ.
(ಎ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ